ಕಬೀಲಾ : ಭಾರತದ ಆದಿವಾಸಿಗಳ ಅಥವಾ ಗಿರಿಜನರ ಬುಡಕಟ್ಟನ್ನು ಸೂಚಿಸುವ ಶಬ್ದ. ಕಬೀಲಿ ಎಂಬುದು ಆ ಬುಡಕಟ್ಟಿಗೆ ಸೇರಿದ ವ್ಯಕ್ತಿಯನ್ನು ಸೂಚಿಸುತ್ತದೆ. ಕಬೀಲ್ ಮತ್ತು ಕಬೀಲಿ ಎಂಬ ರೂಪಗಳು ಗುಣವಾಚಕಗಳ ರೂಪದಲ್ಲಿ ಬಳಕೆಯಲ್ಲಿವೆ. ಇಷ್ಟಾದರೂ ಕಬೀಲಾ ಶಬ್ದಕ್ಕೆ ನಿರ್ದಿಷ್ಟವಾದ ವ್ಯಾಖ್ಯೆದೊರೆತಿಲ್ಲ. ಈ ವಿಚಾರದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಇವರ ಜನಸಂಖ್ಯೆ ಮತ್ತಿತರ ವಿವರಗಳ ಬಗ್ಗೆ ಸಂದೇಹಾತೀತವಾದ ನಿರ್ದಿಷ್ಟ ಮಾಹಿತಿಗಳಿಲ್ಲ. ಈ ಬಗೆಯ ವೈಚಾರಿಕ ಧರ್ಮಬೇಧಗಳಿಂದಾಗಿ ಜನಗಣತಿಯ ವರದಿಗಳಲ್ಲಿಯೂ ಕಬೀಲಿಗಳ ಸಾರಣೀಕರಣ, ವರ್ಗೀಕರಣ ಮತ್ತು ವಿಶ್ಲೇಷಣಗಳಲ್ಲಿ ವ್ಯತ್ಯಾಸಗಳು ಕಾಣದೊರೆಯುತ್ತವೆ. ಕೆಲವೊಮ್ಮೆ ನಿಮ್ನ ಮತ್ತು ಅನುಸೂಚಿತ ವರ್ಗಗಳಲ್ಲಿ ಹಲವಾರು ಕಬೀಲಿಗಳನ್ನು ಸೇರಿಸಲಾಗಿದೆ. ಕೆಲವನ್ನು ಈ ಪಟ್ಟಿಯಿಂದ ಹೊರತಾಗಿಸಲಾಗಿದೆ. ಆತ್ಮವಾದವೇ ಭಾರತೀಯ ಆದಿವಾಸಿಗಳೆಲ್ಲರ ಧರ್ಮ ಎಂಬುದಾಗಿ ಒಂದು ಜನಗಣತಿಯ ವರದಿಯಲ್ಲಿ ಉಲ್ಲೇಖ ಕಾಣದೊರೆತರೆ, ಮತ್ತೊಂದು ವರದಿಯಲ್ಲಿ ಕಬೀಲಿ ಧರ್ಮವನ್ನು ಬೇರೊಂದು ಬಗೆಯ ವಿಶಿಷ್ಟ ಧರ್ಮವೆಂದೇ ನಮೂದಿಸಿರುವುದೂ ಉಂಟು. ಕಬೀಲಿ ವೃತ್ತಿಗಳ ವಿಶಿಷ್ಟೀಕರಣ ಕಾಣಬರುವುದಿಲ್ಲ. ಪ್ರಾದೇಶಿಕ ಸೌಲಭ್ಯಾನುಕೂಲಗಳಿಗನುಗುಣವಾಗಿ ಅವು ವ್ಯತ್ಯಾಸ ಹೊಂದುತ್ತ ಬರುತ್ತವೆ. ನಿಶ್ಚಿತ ಭೌಗೋಳಿಕ ಅಥವಾ ಪ್ರಾದೇಶಿಕ ವಲಯಗಳಲ್ಲಿ ವಾಸಮಾಡುವ ಅಂತರ್ವಿವಾಹ ವ್ಯವಸ್ಥೆಯುಳ್ಳ ಸಾಮಾಜಿಕ ವರ್ಗವನ್ನು ಸ್ಥೂಲವಾಗಿ ಕಬೀಲಾ ಎಂದು ಕರೆಯಬಹುದಾಗಿದೆ. ಒಂದೊಂದು ಕಬೀಲಾ ಗುಂಪಿಗೂ ಒಂದೊಂದು ಭಾಷೆ ಅಥವಾ ಉಪಭಾಷೆಯಿದ್ದು, ಕಬೀಲಿಗಳ ಸಂಘಟನೆಗೂ ಅದು ಕಾರಣವಾಗಿರುತ್ತದೆ. ಪ್ರತಿ ಕಬೀಲಾಕ್ಕೂ ಒಬ್ಬ ಮುಖಂಡನುಂಟು. ಅವನೇ ಬಹಳ ಮಟ್ಟಿಗೆ ಸರ್ವಾಧಿಕಾರಿಯಂತೆ ಅಲ್ಲಿ ಕಾರ್ಯನಿರ್ವಹಿಸುತ್ತಾನೆ. ಈ ಕೆಲವು ಕಾರಣಗಳಿಂದಾಗಿ, ಒಂದೊಂದು ಕಬೀಲಾ ಮತ್ತು ಕಬೀಲಿ ಜಾತಿಗಳಲ್ಲೂ ಭೇದವೆಣಿಸುವ ಪದ್ಧತಿ ಸಾಮಾನ್ಯವಾಗಿ ಕಾಣದೊರೆಯುತ್ತದೆ. ಇಷ್ಟಾದರೂ ಇದು ಸ್ಪೃಶ್ಯಾಸ್ಪೃಶ್ಯ ಭಾವನೆಗಳಾಗಲೀ ಸಾಮಾಜಿಕ ದ್ವೇಷಾಸೂಯಗಳಿಗಾಗಲೀ ಎಡೆಗೊಟ್ಟಿಲ್ಲವೆಂಬುದು ಗಮನಾರ್ಹವಾದ ಸಂಗತಿ. ಬಹಳ ಮಟ್ಟಿಗೆ ಹೊರಗಣ ಪ್ರಭಾವಕ್ಕೆ ಸುಲಭವಾಗಿ ಒಳಗಾಗದಂಥ ಭೌಗೋಳಿಕ ಪರಿಸರದಲ್ಲಿ, ಗುಡ್ಡಗಾಡುಗಳಲ್ಲಿ ವಾಸಮಾಡುವುದರಿಂದ ಈ ವನ್ಯ ನಿವಾಸಿಗಳ ಜೀವನವಿಧಾನ, ರೀತಿನೀತಿಗಳು, ಸಂಪ್ರದಾಯಗಳು ನಂಬಿಕೆಗಳು ಬೇರೆಬೇರೆಯಾಗಿವೆ.

 ಸಂಸ್ಕೃತಿಯ ಪ್ರಭಾವಕ್ಕೊಳಗಾಗಿರುವುದನ್ನೇ ಅಳತೆಗೋಲಾಗಿ ಇಟ್ಟುಕೊಂಡು ಕಬೀಲಾಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿದ್ದಾರೆ; 1. ಅನ್ಯ ಸಂಸ್ಕೃತಿಯ ಸಂಪುರ್ಣ ಪ್ರಭಾವಕ್ಕೆ ಒಳಗಾಗಿರುವುವು. 2.ಕೆಲಮಟ್ಟಿಗೆ ಮಾತ್ರ ಇದರ ಪ್ರಭಾವಕ್ಕೆ ಒಳಗಾಗಿರುವವು ಮತ್ತು 3. ಅನ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗದೆ ಇರುವವು. ನಾಗ, ಕೋಸಿ, ಗಾರೋ, ಬೋಟಿಯ ಮೊದಲಾದವರು ಮೊದಲನೆಯ ವರ್ಗಕ್ಕೂ ಸಂತಾಲರು, ಮುಂಡಾಗಳು, ಕೊರವರು ಮೊದಲಾದವರು ಎರಡನೆಯ ವರ್ಗಕ್ಕೂ, ಬಿಲ್ಲರು ಮತ್ತಿತರ ಹಿಮಾಲಯದ ಕೆಲವು ಆರ್ಯವಂಶೀಜನರು ಮೂರನೆಯ ವರ್ಗಕ್ಕೂ ಸೇರುತ್ತಾರೆ. ಭಾಷಿಕ ದೃಷ್ಟಿಯಿಂದ ಇವನ್ನು ಟಿಬೇಟೋ-ಬರ್ಮನ್ ಮತ್ತು ದ್ರಾವಿಡಭಾಷಾ ಪರಿವಾರಕ್ಕೆ ಸೇರಿದ ಬುಡಕಟ್ಟುಗಳಾಗಿ ವರ್ಗೀಕರಿಸಬಹುದು. ಆದರೆ ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಕ್ರಮೇಣ ಹೊಂದಿ ಕೊಳ್ಳುತ್ತಿರುವ ಈ ಬುಡಕಟ್ಟುಗಳು ತಮ್ಮ ನಿಕಟತಮ ಪ್ರದೇಶಗಳಲ್ಲಿ ಪ್ರಚಲಿತವಾಗಿರುವ ಪ್ರಾದೇಶಿಕ ಭಾಷೆ ಅಥವಾ ಉಪಭಾಷೆಗಳನ್ನೇ ಬಳಸ ತೊಡಗಿವೆ. ಶಸ್ತ್ರ ಸನ್ನದ್ಧವಾಗಿದ್ದು, ಬಹುಮಟ್ಟಿಗೆ ಅಪರಾಧ ಕೃತ್ಯಗಳಲ್ಲೇ ತೊಡಗಿರುತ್ತಿದ್ದ ಕೆಲವು ಬುಡಕಟ್ಟುಗಳೂ ಇದ್ದುವು: ಈಗಲೂ ಇಂಥ ಕೆಲವು ಬುಡಕಟ್ಟುಗಳು ಇವೆ. ಈಚೆಗೆ ಜಾತಿ ಅಥವಾ ವೃತ್ತಿ ಸೂಚಕವಾದ ವಂಶನಾಮ ಮತ್ತು ಉಪನಾಮಗಳನ್ನು ಅಳವಡಿಸಿಕೊಳ್ಳುವ ಪ್ರವೃತ್ತಿ ಕಂಡುಬಂದಿದೆ. ಈ ಕೆಲವು ಕಾರಣಗಳಿಂದಾಗಿ 1961ರಲ್ಲಿ ನಡೆಸಿದ ಜನಗಣತಿಯ ವರದಿಯಲ್ಲಿ ಕಬೀಲಿಗಳ ಒಟ್ಟು ಸಂಖ್ಯೆ ಸು. 2 ಕೋಟಿ ಎಂದು ನಮೂದಿಸಲಾಗಿದೆ. ಆದರೆ ಹಿಂದಿನ ಜನಗಣತಿಗಳಲ್ಲಿ ಈ ಸಂಖ್ಯೆ ಸು. 3 ಕೋಟಿ ಎಂದು ನಮೂದಿತವಾಗಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಸಂಸ್ಕೃತಿ ಸ್ವೀಕರಣ ದೃಷ್ಟಿಯಿಂದ ಈ ಬುಡಕಟ್ಟುಗಳನ್ನು ವರ್ಗೀಕರಿಸಿರುವ ಇತರ ಕೆಲವು ವಿದ್ವಾಂಸರು ಕಬೀಲಾಗಳನ್ನು ಅನುಕೂಲಕ(ಅಡಾಪ್ಟಿವ್) ಮತ್ತು ಸಾತ್ಮೀಕಾರಕ (ಅಸ್ಸಿಮಿಲೇಟಿವ್) ವರ್ಗಗಳೆಂದು ವಿಂಗಡಿಸಿದ್ದಾರೆ. ಅನುಕೂಲಕ ವರ್ಗವನ್ನು ಮೂರು ಉಪವರ್ಗವನ್ನಾಗಿ ವಿಭಜಿಸಲಾಗಿದೆ: ಸಹಭೋಜಿ, ಸಮಜೀವಿ ಮತ್ತು ಅನ್ಯ ಸಂಸ್ಕೃತಿ ಧಾರಕ. ನೆರೆಹೊರೆಯ ವರ್ಗಗಳೊಡನೆ ಸಮಾನಕಾರ್ಯಕ್ರಮಗಳಲ್ಲಿ ಭಾಗವಹಿಸುವ ಉಪವರ್ಗವೇ ಸಹಭೋಜಿ. ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತಮ್ಮ ಕಾಲಮೇಲೆ ನಿಂತಿರುವ ಉಪವರ್ಗಗಳನ್ನು ಸಮಜೀವಿ ಎಂದು ಹೆಸರಿಸಲಾಗಿದೆ. ಹೊರಗಣ ಸಂಸ್ಕೃತಿಯನ್ನು ಒಮ್ಮುಖವಾಗಿ ಸ್ವೀಕರಿಸಿರುವ ವರ್ಗಗಳು ಅನ್ಯಸಂಸ್ಕೃತಿಧಾರಕ ಎಂಬ ಹೆಸರನ್ನು ಪಡೆದಿವೆ. ಕೆಲವಂತೂ, ತಮ್ಮ ಮೂಲ ವೈಷಿಷ್ಟ್ಯಗಳು ಮರೆಯಾಗುವ ಮಟ್ಟಿಗೆ ಅನ್ಯ ಸಂಸ್ಕೃತಿಯಲ್ಲಿ ಲೀನವಾಗಿವೆ. ಹೊಸ ಸಂಸ್ಕೃತಿಗಳು ಹೊಸ ಸಮಸ್ಯೆಗಳನ್ನು ಸೃಷ್ಟಿಸಿವೆ ಎಂಬುದು ನಿಜ. ಇತ್ತ ಹೊರಗಣ ಸಂಸ್ಕೃತಿಯ ಪ್ರಭಾವಕ್ಕೆ ಸುತರಾಂ ಒಳಗಾಗದಿರುವ ಬುಡಕಟ್ಟುಗಳು ಇಂದಿಗೂ ಅಲ್ಲಲ್ಲಿ ಕಾಣಬರುತ್ತವೆ ಎಂಬುದನ್ನು ಇಲ್ಲಿ ಅಗತ್ಯವಾಗಿ ಉಲ್ಲೇಖಿಸಬೇಕು. ಆದರೆ, ಸಾಂಸ್ಕೃತಿಕ ಸಂಪರ್ಕದ ಕ್ಷೇತ್ರದಲ್ಲಿ ಶೂನ್ಯಬಿಂದು ಬಹಳಮಟ್ಟಿಗೆ ಕಾಣದೊರೆಯುವುದಿಲ್ಲ. ಎಂಬುದನ್ನು ಮರೆಯುವಂತಿಲ್ಲ. ಭಾರತದ ಮಟ್ಟಿಗಂತೂ ಈ ಮಾತು ಇನ್ನೂ ಚೆನ್ನಾಗಿ ಅನ್ವಯಿಸುತ್ತದೆ. ದೇಶೀಯ ಮತ್ತು ವಿದೇಶೀಯ ಸಂಸ್ಕೃತಿಗಳ ಸಂಪರ್ಕವನ್ನು ಪಡೆಯದಿರುವ, ತತ್ಪರಿಣಾಮವಾಗಿ ವಿಶಿಷ್ಟ ಸಮಸ್ಯೆಗಳನ್ನು ಎದುರಿಸದಿರುವ ಆದಿವಾಸಿ ಸಮಾಜವಿಲ್ಲ. ಇದ್ದರೆ ಅದು ಕೇವಲ ಅಪವಾದಸ್ವರೂಪವಾಗಿದೆ ಎಂದು ಹೇಳಬೇಕಾಗುತ್ತದೆ. ಧರ್ಮಪ್ರಚಾರಕರ, ಉದ್ಯಮಶೀಲರ ಸಾಹಸ ಮತ್ತು ಪ್ರಯತ್ನಗಳ ಫಲವಾಗಿ ಸೂರ್ಯನ ಕಿರಣವೂ ಸೋಕದ ಎಡೆಗಳಲ್ಲಿ ವಾಸಿಸುತ್ತಿದ್ದ ಗಿರಿಜನರ ಸಾಮಾಜಿಕ ಸಾಂಸ್ಕೃತಿಕ ಜೀವನದಲ್ಲೂ ಏರುಪೇರುಗಳುಂಟಾದುವು. ವಿದೇಶೀ ಸಂಸ್ಕೃತಿ ಕೆಲವೊಂದು ಸಮಸ್ಯೆಗಳನ್ನು ಸೃಷ್ಟಿಸಿತು. ಈ ಬಗೆಯ ಸಂಪರ್ಕ ಸಾಹಚರ್ಯಗಳಿಂದುಂಟಾದ ಲೈಂಗಿಕ ರೋಗಗಳ ಫಲವಾಗಿ ಕೆಲವು ಬುಡಕಟ್ಟುಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸಿತು ಎಂಬ ವಾದವೂ ಇದೆ. ಹೀಗಾಗಿ ವಿದೇಶೀ ಸಂಸ್ಕೃತಿ ವರವಾಗಿ ಬಂದಂತೆಯೇ ಅಭಿಶಾಪವೂ ಆಗಿ ಪರಿಣಮಿಸಿತೆನ್ನಬಹುದು.

ಕಬೀಲಿಗಳು ಬಹಳಮಟ್ಟಿಗೆ ಗುಡ್ಡಗಾಡುಗಳಲ್ಲಿಯೇ ವಾಸಿಸುವ ಜನ. ನೈಸರ್ಗಿಕ ಸಾಧನ-ಸೌಲಭ್ಯಗಳನ್ನೇ ಅವಲಂಬಿಸಿಕೊಂಡು ಈ ಜನ ಜೀವನಯಾಪನೆ ಮಾಡ ಬೇಕಾಗುತ್ತದೆ. ಕೇರಳದ ಕಾಡಾರ್, ಚೆನ್ನೈನ ಪಲಿಯನ್ ಮತ್ತು ವೈನಾಡಿನ ಪಣಿಯನ್ ಮೊದಲಾದ ಬುಡಕಟ್ಟುಗಳು ಈ ವರ್ಗಕ್ಕೆ ಸೇರಿದುವು. ಆಹಾರ ಪದಾರ್ಥಗಳ ಸಂಗ್ರಹ ಮತ್ತು ವ್ಯವಸಾಯ ಕಾರ್ಯಗಳನ್ನು ಕೈಗೊಂಡಿರುವ ಕೆಲವು ಕಬೀಲಾಗಳೂ ಇವೆ. ಸಂಗ್ರಹಕಾರ್ಯದ ಬಗ್ಗೆ ಯಾವುದೋ ಒಂದು ನಂಬಿಕೆ ಈ ಜನರಲ್ಲಿ ಮನೆಮಾಡಿ ಕೊಂಡಂತೆ ತೋರುತ್ತದೆ. ಏಕೆಂದರೆ, ಕೆಲವು ಬುಡಕಟ್ಟುಗಳು ವ್ಯವಸಾಯವನ್ನೇ ಸಂಪುರ್ಣ ವಾಗಿ ಅವಲಂಬಿಸಿದ್ದರೂ ಸಂಗ್ರಹಕಾರ್ಯವನ್ನೂ ತಮ್ಮ ಮುಖ್ಯ ವೃತ್ತಿ ಎಂಬಂತೆ ಮುಂದುವರಿಸಿಕೊಂಡು ಬಂದಿವೆ.

ಸ್ವಾತಂತ್ರ್ಯಪುರ್ವ ಅವಧಿಯಲ್ಲಿ ಬ್ರಿಟಿಷ್ ಸರ್ಕಾರ ಗಿರಿಜನರ ಏಳಿಗೆಯ ಬಗ್ಗೆ ವಿಶೇಷ ಆಸಕ್ತಿಯನ್ನೇನೂ ತೋರಲಿಲ್ಲ. ಆದರೆ, ಸ್ವಾತಂತ್ರ್ಯಾನಂತರ ಭಾರತ ಸರ್ಕಾರ ಈ ವಿಚಾರದಲ್ಲಿ ತುಂಬ ಆಸಕ್ತಿ ವಹಿಸಿದೆ. ಅದರ ಪ್ರಗತಿಗಾಗಿ ವಿಶೇಷವಾಗಿ ಶ್ರಮಿಸುತ್ತಿದೆ. ಗಿರಿಜನರ ಮರುವಸತಿಕಾರ್ಯ ನಡೆಯುತ್ತದೆ. ಆದರೆ, ಬೇರೆ ಬೇರೆ ರೀತಿಗಳಲ್ಲಿ ಬೇರೆ ಬೇರೆ ಪ್ರಮಾಣಗಳಲ್ಲಿ ಅನ್ಯಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ತತ್ಫಲವಾಗಿ ಅವುಗಳ ಪ್ರಗತಿಯಲ್ಲೂ ಗಮನಾರ್ಹ ವ್ಯತ್ಯಾಸಗಳು ಕಂಡುಬರುವುದರಿಂದ ರೀತಿ ನಿರ್ಧಾರಣ ಅಷ್ಟೇನೂ ಸುಲಭವಾಗಿ ಪರಿಣಮಿಸಿಲ್ಲ. ಈ ಮರುವಸತಿ ಅಥವಾ ಪುನರ್ನಿವೇಶನ ಕಾರ್ಯದಲ್ಲಿಯ ಉತ್ಸಾಹ ಅವರ ಪರಂಪರಾಗತ ಸಂಸ್ಕೃತಿಯ ವಿನಾಶಕ್ಕೆ ಕಾರಣವಾಗದಂತೆ ಎಚ್ಚರವಹಿಸಲಾಗಿದೆ.

ಕಬೀಲಿ ಜನರು ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದುದೂ ಉಂಟು. ಸಾಹುಕಾರರು ಮತ್ತು ವಿದೇಶೀಯ ವರ್ತಕರು ಕಬೀಲಿ ಜನರ ಆಸ್ತಿಪಾಸ್ತಿಗಳನ್ನು ಒಂದಲ್ಲ ಒಂದು ರೀತಿಯಿಂದ ವಶಪಡಿಸಿಕೊಂಡು ಅವರನ್ನು ಹೊರಗಟ್ಟುತ್ತಿದ್ದುದು, ಸಾಮಾಜಿಕವಾಗಿ ಆರ್ಥಿಕವಾಗಿ ಅವರನ್ನು ಶೋಷಿಸತೊಡಗಿದ್ದು, ಕಬೀಲಿ ಜನರ ನೈಸರ್ಗಿಕ ಸಾಧನ ಸೌಲಭ್ಯಗಳನ್ನು ಹೊರಗಿನವರು ಆಕ್ರಮಿಸಿಕೊಂಡು ಉಪಭೋಗಿಸತೊಡಗಿ ಅವರ ಜೀವನವನ್ನು ಕ್ಲೇಶಪುರ್ಣವಾಗಿಸಿದ್ದು-ಇವು ಹಿಂಸಾತ್ಮಕ ಚಟುವಟಿಕೆಗಳಿಗೆ ಕಾರಣವಾದುವು. ಹೀಗಾಗಿ, ಬ್ರಿಟಿಷರ ಕಾಲದಲ್ಲಿ ಲೂಟಿ, ದರೋಡೆ, ಕ್ರಾಂತಿಯ ವರದಿಗಳು ಆಗಿಂದಾಗ ಕೇಳಿ ಬರುತ್ತಿದ್ದು, ಕಬೀಲಿ ಜನರೆಂದರೆ ಅಪರಾಧೋಪಜೀವಿಗಳು ಎನ್ನುವ ಭಾವನೆ ಮೂಡುವಂತಾಗಿತ್ತು. ಶಾಸನಬದ್ಧ ರೀತಿಯಲ್ಲಿ ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯುವ ಪ್ರಯತ್ನ ನಡೆಯಲಿಲ್ಲ. ಶಾಸನ ಹಾಗೂ ಶಸ್ತ್ರಾಸ್ತ್ರಗಳ ಬಲದಿಂದ ಅವರನ್ನು ನಿಗ್ರಹಿಸಬೇಕೆಂದು ವರ್ತಕರೂ, ಜಮೀನುದಾರರೂ ಸರ್ಕಾರವನ್ನು ಒತ್ತಾಯಪಡಿಸ ತೊಡಗಿದಾಗ, ಸೈನಿಕರ ನೆರವು ಪಡೆದುಕೊಳ್ಳುವ ಪ್ರಯತ್ನಗಳು ನಡೆದಾಗ, ಹಿಂಸೆಯ ಪ್ರಾಬಲ್ಯ ಹೆಚ್ಚುತ್ತಲೇ ಹೋಯಿತು. ಇಂಥ ಪರಿಸ್ಥಿತಿಗಳಲ್ಲಿ ಕಬೀಲಿ ಜನ ತಮ್ಮ ಮುಖಂಡರಿಗೆ ಕಾರ್ಯಾಚರಣೆಯ ಮತ್ತು ದಂಡನೆಯ ಅಧಿಕಾರಗಳನ್ನು ನೀಡಿದರು. ಈ ದಂಗೆಗಳನ್ನು ಅಡಗಿಸಲು ಕಬೀಲಿ ನಾಯಕರಿಗೆ ಸರ್ಕಾರದವರು ಸನ್ನದುಗಳನ್ನು ಕೊಟ್ಟು ಸೇಡಿನ ಜ್ವಾಲೆ ಶಾಂತವಾಗುವಂತೆ ಮಾಡಿದ್ದೂ ಉಂಟು. ಶಿಸ್ತು, ನ್ಯಾಯ ಮತ್ತು ಶಾಂತಿ ಪಾಲನೆಯ ದೃಷ್ಟಿಯಿಂದ ಕಬೀಲಿ ಜನಕ್ಕೂ ನಾಗರಿಕ ಅಧಿಕಾರಗಳನ್ನು, ಹಕ್ಕುಗಳನ್ನು ಕೊಡಬೇಕೆಂಬ ಸತ್ಯವನ್ನು ಅಂದಿನ ಬ್ರಿಟಿಷ್ ಸರ್ಕಾರ ತಡವಾಗಿಯಾದರೂ ಮನಗಂಡಿತು. ವಿಶೇಷಾಧಿಕಾರವುಳ್ಳ ಅಧಿಕಾರಿಯೊಬ್ಬನನ್ನು ನೇಮಿಸಿ, ಗಿರಿಜನರ ಯೋಗಕ್ಷೇಮದ ಭಾರವನ್ನು ಅವನಿಗೆ ವಹಿಸಲಾಯಿತು. ನಾಡಿನ ಇತರ ಭಾಗಗಳಲ್ಲಿ ಪ್ರಚುರವಾಗಿದ್ದ ನಿಯಮಗಳಿಗೂ ಇವಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದುವು. ಕಬೀಲಿ ಜನರನ್ನು ಸಾಮಾನ್ಯ ನ್ಯಾಯಾಲಯಗಳ ವ್ಯಾಪ್ತಿಯಿಂದ ಹೊರತಾಗಿಸಲಾಯಿತು. ಈ ವಿಶೇಷಾಜ್ಞೆ 1872ರಲ್ಲಿ ಜಾರಿಗೆ ಬಂದಿತು. ಸಾಮಾಜಿಕ ಅತ್ಯಾಚಾರ ಮತ್ತು ಆರ್ಥಿಕ ಶೋಷಣೆಗಳು ಮುಂದುವರಿದಾಗ 1886ರಲ್ಲಿ ಸಂತಾಲರ ದಂಗೆಯೆಂದು ಪ್ರಸಿದ್ಧವಾಗಿರುವ ದಂಗೆ ನಡೆಯಿತು. ಛೋಟಾ ನಾಗಪುರ ಮತ್ತು ಸಂತಾಲಪರಗಣ ಈ ಕ್ರಾಂತಿಯ ಕೇಂದ್ರಗಳಾಗಿದ್ದುವು. ಕಬೀಲ ಸಮಸ್ಯೆಗಳನ್ನು ಪರಿಹರಿಸುವತ್ತ ತೀವ್ರ ಗಮನಕೊಡುವುದು ಅನಿವಾರ್ಯವಾಯಿತು. ಸಂತಾಲ ಪರಗಣ ಎಂಬ ಹೆಸರಿನಲ್ಲಿ ಒಂದು ಹೊಸಜಿಲ್ಲೆಯನ್ನೇ ಸ್ಥಾಪಿಸಿ ಒಬ್ಬ ವಿಶೇಷ ಆಡಳಿತಾಧಿಕಾರಿಯನ್ನು ನೇಮಿಸಲಾಯಿತು. 1855ರ 38ನೆಯ ಕಾಯಿದೆಯಂತೆ ಈ ಗಿರಿಜನರು ವಾಸಿಸುತ್ತಿದ್ದ ಕ್ಷೇತ್ರಗಳನ್ನು ವಿಶೇಷಾಧಿಕಾರ ವಲಯಗಳೆಂದು ಘೋಷಿಸಲಾಯಿತು. ಪೋರ್ಟ್ ವಿಲಿಯಂ, ಪೋರ್ಟ್ ಸೇಂಟ್ ಜಾರ್ಜ್ ಮತ್ತು ಮುಂಬಯಿಯ ಆಡಳಿತ ಮಂಡಳಿಗಳು ಹೊಸ ಅಧಿನಿಯಮಗಳನ್ನು ಜಾರಿಗೆ ತಂದವು. 1870ರ ಭಾರತ ಸರ್ಕಾರದ ಕಾಯಿದೆ ಗನುಗುಣವಾಗಿ ಈ ಪ್ರಾಂತೀಯ ಅಧಿಕಾರಿಗಳಿಗೆ ವಿಶೇಷ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ಕೊಡಲಾಯಿತು. ಬ್ರಿಟಿಷ್ ಭಾರತದ ಉಳಿದ ಭಾಗಗಳಿಗೆ ಅನ್ವಯವಾಗುತ್ತಿದ್ದ ಕಾನೂನುಗಳನ್ನು ಈ ಗಿರಿಜನರಿಗೆ ಅನ್ವಯಿಸುವಂತೆ ಇರಲಿಲ್ಲ. ಹಾಗೇನಾದರೂ ಮಾಡಬೇಕಾದರೆ ಪುರ್ವ ಸೂಚನೆ ನೀಡಿ ಪುರ್ವಾನುಮತಿ ಪಡೆದುಕೊಳ್ಳಬೇಕಾಗುತ್ತಿತ್ತು. 1874ರಲ್ಲಿ ವಿಧಾನಮಂಡಲ ಅಂಗೀಕರಿಸಿದ್ದ 14ನೆಯ ಜಿಲ್ಲಾ ಅನುಸೂಚಿತ ಕಾಯಿದೆಗಳಿಗೆ ಅನುಗುಣವಾಗಿ ಸ್ಥಳೀಯ ವಿಶೇಷಾಧಿಕಾರಗಳನ್ನು ನಿರ್ದಿಷ್ಟ ವಲಯಗಳಲ್ಲಿ ಜಾರಿಗೆ ಕೊಡುವ ಅಧಿಕಾರವನ್ನು ನೀಡಲಾಯಿತು. ಅಗತ್ಯಾನುಸಾರ, ಕಾನೂನುಗಳನ್ನು ಸೀಮಿತ ರೂಪದಲ್ಲಿ ಬಳಸುವುದಾದಲ್ಲಿ ಅಥವಾ ತಿದ್ದುಪಡಿಗಳನ್ನು ಮಾಡಬೇಕಾಗಿದ್ದಲ್ಲಿ ಕೇಂದ್ರಸರ್ಕಾರಕ್ಕೆ ಆ ವಿವರಗಳನ್ನು ತಿಳಿಸುವುದು ಕಡ್ಡಾಯವಾಗಿತ್ತು. ಇಷ್ಟಾದರೂ ಈ ವಿಶಿಷ್ಟ ಆಡಳಿತ ವ್ಯವಸ್ಥೆಯು ಗಿರಿಜನರ ಸಮಸ್ಯೆಗಳನ್ನು ಪುರ್ಣವಾಗಿ ಪರಿಹರಿಸಲಾರದೆ ಹೋಯಿತು.

ಪ್ರತ್ಯಕ್ಷ, ಪರೋಕ್ಷ ಅನ್ಯಾಯ ಅಥವಾ ಶೋಷಣೆಗಳನ್ನು ತಪ್ಪಿಸುವ ದೃಷ್ಟಿಯಿಂದ 1876ರಲ್ಲಿ ಕಬೀಲಿ ಆಸ್ತಿಪಾಸ್ತಿಗಳ ಪರಭಾರೆ ಮತ್ತು ಮಾರಾಟಗಳ ಮೇಲೆ ವಿಧಿ ನಿಷೇಧಗಳನ್ನು ಹಾಕಲಾಗಿತ್ತು. ವೈಯಕ್ತಿಕವಾಗಿ ಅಥವಾ ನ್ಯಾಯಾಲಯಗಳ ಆಜ್ಞೆಯ ಮೂಲಕ ಕಬೀಲಿ ಆಸ್ತಿಪಾಸ್ತಿಗಳನ್ನು ಕೈಬದಲು ಮಾಡುವುದನ್ನು ನಿಷೇಧಿಸಲಾಗಿತ್ತು. ಜಮೀನುದಾರರಿಂದ ಶೋಷಣೆಗಳಿಗೊಳಗಾಗುವುದನ್ನು ತಪ್ಪಿಸುವ ದೃಷ್ಟಿಯಿಂದ 1917ರಲ್ಲಿ ಮದ್ರಾಸ್ ಸರ್ಕಾರವು ಒಂದು ವಿಶೇಷ ಕಾಯಿದೆಯನ್ನು ಜಾರಿಗೆ ತಂದಿತು. ಕಬೀಲಿಗಳಿಗೆ ನೀಡುವ ಸಾಲದ ಮೇಲೆ ಬಡ್ಡಿಯ ಮಿತಿ ವಿಧಿಸಲಾಯಿತು. 

ಕಬೀಲಿ ಸ್ಥಿತಿಗತಿಗಳನ್ನು ಉತ್ತಮ ಪಡಿಸುವ ದೃಷ್ಟಿಯಿಂದ ಮೌಂಟ್ಫರ್ಡನ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿ 1916ರ ಕಾಯಿದೆಯ 52ನೆಯ ಕಲಮಿನನ್ವಯ ಆಡಳಿತ ವರ್ಗದ ಹೊಣೆಗಾರಿಕೆ ಎಷ್ಟೆಂಬುದನ್ನು ಸ್ಪಷ್ಟಪಡಿಸಿತು. 1935ರಲ್ಲಿ ಗಿರಿಜನರ ಸಂಖ್ಯೆ ಅನೂಚಾನವಾಗಿ ಮುಂದುವರೆಯುವಂತೆ ಮಾಡಲು ಕೆಲವು ರಕ್ಷಣಾತ್ಮಕ ವಿಧಾನಗಳನ್ನು ಮುಂಜಾಗರೂಕತೆಯ ಕ್ರಮಗಳನ್ನು ಕಾರ್ಯರೂಪಕ್ಕೆ ತರಲಾಯಿತು. ಭಾರತೀಯ ಸಂವಿಧಾನವು ಗಿರಿಜನರ ಏಳಿಗೆಯ ವಿಚಾರಕ್ಕೆ ವಿಶೇಷ ಪ್ರಾಧಾನ್ಯ ನೀಡಿದೆ. ಸಮಾಜ ಕಲ್ಯಾಣ, ಸಮುದಾಯವಿಕಾಸ ಮತ್ತು ಆರೋಗ್ಯ ಹಾಗೂ ಶಿಕ್ಷಣ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಗಿರಿಜನರಿಗೆ ಆಡಳಿತ ಸೇವಾ ವ್ಯವಸ್ಥೆಯಲ್ಲಿ, ಶಾಸನಸಭೆ ಮತ್ತು ಲೋಕಸಭೆಗಳಲ್ಲಿ ಕೆಲವು ಸ್ಥಾನಗಳನ್ನು ಮೀಸಲಾಗಿಟ್ಟಿದೆ. ಇವರ ಕಲ್ಯಾಣಸಾಧನೆಗಾಗಿ ಒಬ್ಬ ಕಮೀಷನರನ್ನು ನೇಮಿಸಲಾಗಿದೆ. ಈ ಇಲಾಖೆ ಗಿರಿಜನರ ಜೀವನ ವಿಧಾನಗಳನ್ನು ಉತ್ತಮಪಡಿಸುವ ಸದಾಶಯದಿಂದ ಮುನ್ನಡೆಯುತ್ತಿದೆ. 
(ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ